ಮತಿಗೇಡು - 
	ಗಹನವಾದ ಮನೋವಿಕಲ್ಪ (ಸೈಕೋಸಿಸ್). ಮನೋ ವ್ಯಾಪಾರಗಳು ಹದಗೆಟ್ಟು ವಕ್ರವಾಗಿ ವ್ಯಕ್ತಿತ್ತ್ವವನ್ನೇ ಬದಲಾಯಿಸುವಷ್ಟು ತೀವ್ರವಾಗಿರುವುದು ಮತಿಗೇಡಿನ ವೈಶಿಷ್ಟ್ಯ. ತನ್ನ ಮನಸ್ಸು ಗ್ರಹಿಸಿರುವುದಕ್ಕೂ ನಿಜಸ್ಥಿತಿಗೂ ಎಷ್ಟು ವ್ಯತ್ಯಾಸ ಇದೆ ಎಂಬುದನ್ನು ಮತಿಗೆಟ್ಟವ ಗ್ರಹಿಸಲಾರ. ತನ್ನ ಭಾವನೆಗೆ ಬಂದದ್ದೇ ನಿಜ ಎಂದು ನಂಬುವುದರಿಂದ ಭ್ರಾಂತಿ ಭ್ರಮೆಗಳಿಗೆ ವ್ಯಕ್ತಿ ಈಡಾಗುತ್ತಾನೆ. ಅದು ಭ್ರಾಂತಿ ಎಂಬುದು ಅವನಿಗೆ ತಿಳಿಯುವುದೆ ಇಲ್ಲವಾದ್ದರಿಂದ ಪ್ರಸಂಗತ್ವೇನ ನಡವಳಿಕೆಗಳು ಬಲುಮಟ್ಟಿಗೆ ಬದಲಾಗಿರುತ್ತವೆ. ದೈಹಿಕವಾಗಿ ರೋಗಪ್ರಕ್ರಿಯೆಗಳಿಂದ ಒಡಗೂಡಿರುವ ಮತಿಗೇಡು ಒಂದು ವಿಧ (ಆಗ್ರ್ಯಾನಿಕ್ ಸೈಕೋಸಿಸ್). ದೈಹಿಕವಾಗಿ ಯಾವ ರೋಗವೂ ಪತ್ತೆ ಆಗದೆ ಶುದ್ಧ ಮಾನಸಿಕವಾದ ಮತಿಗೇಡು ಇನ್ನೊಂದು ವಿಧ (ಫಂಕ್ಷನಲ್ ಸೈಕೋಸಿಸ್). ಈ ಎರಡನೆಯ ಬಗೆಯನ್ನು ವ್ಯಕ್ತಿಯ ನಡೆವಳಿಕೆಯಿಂದ ಪತ್ತೆ ಮಾಡಬೇಕೇ ಹೊರತು ಪ್ರಾಯೋಗಿಕ ತನಿಖೆಗಳಿಂದ ಮಾಡಲು ಸಾಧ್ಯವಿಲ್ಲ. ಮಿದುಳುರೋಗ ಅಥವಾ ಬೇರೆ ಯಾವುದೋ ಅಂಗದ ರೋಗವಿದ್ದು ಅದನ್ನು ಪ್ರಯೋಗಾಲಯ ಪರೀಕ್ಷೆಗಳಿಂದ ಪತ್ತೆ ಮಾಡಬಹುದಾಗಿರುತ್ತದೆ. ಇಂಥ ಮತಿಗೇಡಿಯಲ್ಲಿ ಕಂಡು ಬರುವ ವಿಶಿಷ್ಟ ಲಕ್ಷಣಗಳಲ್ಲಿ ಕೆಲವನ್ನು ವಿವರಿಸಿದೆ. ಕಾಲ, ಸ್ಥಳ ಹಾಗೂ ವ್ಯಕ್ತಿಗಳ ಅಂದಾಜು ತಪ್ಪಿಹೋಗಿರುವುದು, ನೆನಪು-ಬಲು ಹಿಂದಿನದಕ್ಕಿಂತ ಇತ್ತೀಚಿನ ನೆನಪು-ಬಾರದಿರುವುದು, ಬುದ್ಧಿಶಕ್ತಿಯಿಂದ ಮೂಡಬೇಕಾದ ಅರಿವು (ಕಾಂಪ್ರೆಹೆನ್‍ಕ್ಷನ್) ಮತ್ತು ಗೋಜಲು ಪ್ರಸಂಗಗಳನ್ನು ಬಿಡಿಸಲು ಅಗತ್ಯವಾದ ಮನೋತೀಕ್ಷ್ಣತೆ ಮೊಟಕಾಗಿರುವುದು, ದಿನನಿತ್ಯದ ಜಂಜಾಟಕ್ಕೆ ಬಗ್ಗಿಕೊಳ್ಳುವುದರಲ್ಲಿ ಕಷ್ಟವಾಗುವುದು. ಹಠಾತ್ತಾಗಿ ಭಾವೋದ್ರೇಕಗೊಳ್ಳುವುದು, ದೃಷ್ಟಿ ಭ್ರಾಂತಿಗಳಿಂದ ಭೀತಿಪಟ್ಟು ಒದ್ದಾಡುವುದು ಇತ್ಯಾದಿ.

	ಕೂರಮತಿಗೇಡಿಗೆ ಸನ್ನಿ(ಡೆಲಿರಿಯಮ್) ಎಂದು ಕರೆಯುವುದೂ ಉಂಟು. ಇದು ಮಿದುಳುಪೊರೆಯ ಉರಿಯೂತ, ಮಿದುಳು ಉರಿಯೂತ, ನ್ಯೂಮೋನಿಯ, ಟೈಫಾಯಿಡ್ ಜ್ವರ ಮುಂತಾದ ಸೋಂಕು ಪರಿಸ್ಥಿತಿಗಳಲ್ಲಿ, ಅಪಘಾತದಲ್ಲಿ ತಲೆಗೆ ಭಾರಿಪೆಟ್ಟು ಬಿದ್ದಾಗ, ಹಠಾತ್ತಾಗಿ ಜೀವಸತ್ವಗಳ ಪೂರ್ಣ ಕೊರತೆ ಉಂಟಾದಾಗ, ಅಪರೂಪವಾಗಿ ಶಸ್ತ್ರಕ್ರಿಯಾನಂತರ ಕಂಡುಬರುತ್ತದೆ. ಇವೆಲ್ಲ ಅಲ್ಪಕಾಲಿಕ ಮತಿಗೇಡುಗಳು. ಸಾಮಾನ್ಯವಾಗಿ ರೋಗಪರಿಸ್ಥಿತಿ ತಿಳಿಯಾದಂತೆ ತಾನಾಗಿಯೇ ಮಾಯವಾಗುವಂಥವು.

	ದೀರ್ಘಕಾಲಿಕ ಮತಿಗೇಡಿಗೆ ಮನೋವಿಕಲ್ಪ, ಚಿತ್ತಗೆಡಿಕೆ ಇತ್ಯಾದಿ ಹೆಸರುಗಳಿವೆ. ಇದು ಹೆಚ್ಚುಕಡಿಮೆ ಶಾಶ್ವತವಾದ ಮನೋವಿಕಲ್ಪಸ್ಥಿತಿ. ವ್ಯತ್ಯಸ್ತವಾಗಿರುವ ಮಿದುಳುಕ್ರಿಯೆಯನ್ನು ಸರಿಪಡಿಸಲು ಸಾಧ್ಯವಾಗದು. ಆದ್ದರಿಂದ ಇಲ್ಲಿ ಜ್ಞಾಪಕಶಕ್ತಿ, ಅರಿವು ಮತ್ತು ನಿರ್ಧರಣ ಸಾಮಥ್ರ್ಯ ಶಾಶ್ವತವಾಗಿ ಮೊಟಕಾಗಿರುತ್ತವೆ. 

	ಫರಂಗಿರೋಗ ಮಿದುಳನ್ನು ಆವರಿಸಿರುವಿಕೆ, ಮಿದುಳಿನ ಅಪಧಮನಿಗಳಲ್ಲಿ ಪೆಡಸಣೆ (ಆರ್ಟಿಯೋಸ್ಕ್ಲರೋಸಿಸ್) ಕಂಡುಬರುವಿಕೆ, ಮಿದುಳಿನ ಮರ್ಮಸ್ಥಾನಗಳಲ್ಲಿ ಗಂತಿ ಉಂಟಾಗುವಿಕೆ ಇವು ಮತಿಗೇಡಿಗೆ ಸಾಮಾನ್ಯ ಕಾರಣಗಳು. ದೈಹಿಕರೋಗಗಳಾದ ಪೆಲ್ಲಾಗ್ರ (ಃ ಜೀವಸತ್ವ ಗುಂಪಿಗೆ ಸೇರಿದ ನಿಕೊಟಿನ್ ಅಮೈಡ್ ಎಂಬ ರಾಸಾಯನಿಕದ ಕೊರತೆಯಿಂದ ಉಂಟಾದ ರೋಗ), ಪರ್ನಿಷಿಯಸ್ ಅನೀಮಿಯ (ಃ12 ಜೀವಸತ್ವದ ಅಭಾವದಿಂದ ಉಂಟಾದ ರಕ್ತಕಣಕೊರತೆ). ಮಿಕ್ಸಿಡೀಮ (ಥೈರಾಯ್ಡ್ ಗ್ರಂಥಿಯ ಕ್ರಿಯಾಕೊರತೆಯಿಂದ ಉಂಟಾದ ರೋಗ) ಇವುಗಳಲ್ಲೂ ಮತಿಗೇಡು ಸಂಭವಿಸುವುದಿದೆ. 

	ನಲವತ್ತು ವರ್ಷ ಕಳೆದ ವ್ಯಕ್ತಿಯಲ್ಲಿ ಮೊತ್ತಮೊದಲಾಗಿ ಮಾನಸಿಕ ಏರುಪೇರು ಕಂಡುಬಂದರೆ ಅವನು ಮತಿಗೇಡಿಗೆ ಈಡಾಗಿದ್ದಾನೆ ಎಂದು ಸಂದೇಹಿಸಬೇಕು. ತತ್‍ಕ್ಷಣ ಕಾರಣ ಏನೆಂದು ತನಿಖೆ ಮಾಡಬೇಕು; ಪತ್ತೆ ಆದ ಕೊಡಲೆ ಯುಕ್ತ ಚಿಕಿತ್ಸೆ ಕೊಟ್ಟಲ್ಲಿ ರೋಗ ಮುನ್ನಡೆಯನ್ನು ಬಲುಮಟ್ಟಿಗೆ ತಡೆಯಬಹುದು. ರೋಗ ಮುಂದುವರಿದದ್ದೇ ಆದರೆ ಲಾಕ್ಷಣಿಕವಾಗಿ ಎಷ್ಟು ಚಿಕಿತ್ಸಿಸಬಹುದೋ ಅಷ್ಟೇ ಸಾಧ್ಯ.				 
(ಎಸ್.ಎಂ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ